ವಿಜಯಭಾಸ್ಕರ್
(1931-2002). ವಿಜಯಭಾಸ್ಕರ್ ಓದಿದ್ದು ಮೆಕಾನಿಕಲ್ ಇಂಜಿನಿಯರಿಂಗ್. ಆದದ್ದು ಸಂಗೀತ ನಿರ್ದೇಶಕ. ಇದು ಕನ್ನಡದ ಹೆಸರಾಂತ ಸಂಗೀತ ನಿರ್ದೇಶಕ ವಿಜಯಭಾಸ್ಕರ ಸಾಧನೆ. 1931ರಲ್ಲಿ ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಹುಟ್ಟಿದ ವಿಜಯಭಾಸ್ಕರ್ ಅವರಿಗೆ ಮೊದಲಿನಿಂದಲೂ ಸಂಗೀತದಲ್ಲಿ ಆಸಕ್ತಿ. ಆ ಆಸಕ್ತಿಯೇ ವಿಜಯಭಾಸ್ಕರ್ ಬೆಂಗಳೂರು ಬಿಟ್ಟು ಮುಂಬೈ ಸೇರಲು ಕಾರಣ. ಹಿಂದಿ ಚಿತ್ರಜಗತ್ತಿನ ವಿಖ್ಯಾತ ಸಂಗೀತ ಸಂಯೋಜಕ ನೌಷಾದ್ ಅವರ ಬಳಿ ಸಹಾಯಕರಾಗಿ ಸಂಗೀತ ಸಂಯೋಜನೆಯಲ್ಲಿ ಪರಿಣತಿಗಳಿಸಿದರು. ಪಿಯಾನೋ ವಾದಕರೂ ಆದರು. ಮಾಧವಲಾಲ್ ಮಾಸ್ಟರ್ ಸಾನ್ನಿಧ್ಯದಲ್ಲಿ ಹಿಂದೂಸ್ಥಾನಿ ಹಾಗೂ ಕರ್ನಾಟಕ ಸಂಗೀತ ಕಲಿತ ವಿಜಯಭಾಸ್ಕರ್ ಆ ಎರಡೂ ಪ್ರಕಾರಗಳಲ್ಲಿ ಪರಿಣತರಾದರು. ನೌಷಾದ್‍ರ ಸಹಾಯಕರಾಗಿದ್ದ ವಿಜಯಭಾಸ್ಕರ್ ಅವರನ್ನು ಕನ್ನಡ ಚಿತ್ರರಂಗಕ್ಕೆ ಕರೆತಂದವರು ``ಶ್ರೀರಾಮಪೂಜಾ ಚಿತ್ರದ ನಿರ್ಮಾಪಕ-ನಿರ್ದೇಶಕ ಬಿ.ಆರ್.ಕೃಷ್ಣಮೂರ್ತಿ. ``ಶ್ರೀರಾಮ ಪೂಜಾ ವಿಜಯಭಾಸ್ಕರ್ ಸಂಗೀತ ಸಂಯೋಜಿಸಿದ ಮೊದಲ ಚಿತ್ರವಾಯಿತು. ಮುಂಬೈನಲ್ಲಿ ಚಲನಚಿತ್ರ ಛಾಯಾಗ್ರಹಣ ಕಾರ್ಯದಲ್ಲಿ ಸಹಾಯಕರಾಗಿ ದುಡಿಯುತ್ತಿದ್ದ ಕನ್ನಡಿಗ ಎನ್.ಜಿ.ರಾವ್, ವಿಜಯಭಾಸ್ಕರ್ ಬರೆದ ಕಥೆಯ ಆಧರಿಸಿ ``ಭಾಗ್ಯಚಕ್ರ ಚಿತ್ರ ನಿರ್ಮಿಸಲು ತೊಡಗಿದಾಗ ವಿಜಯಭಾಸ್ಕರ್ ಆ ಚಿತ್ರದ ಸಂಗೀತ ನಿರ್ದೇಶಕರಾದರು. ಮಹಮ್ಮದ್ ರಫಿ ಈ ಚಿತ್ರದಲ್ಲಿ ``ನೀನೆಲ್ಲಿ ನಡೆವೆ ದೂರ” ಎಂಬ ಕನ್ನಡ ಹಾಡನ್ನು ಹಾಡಿದ್ದಾರೆ. ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು ಹಾಗೂ ಮಲೆಯಾಳಂ ಚಿತ್ರಗಳಿಗೂ, ತುಳು-ಕೊಂಕಣಿ ಚಿತ್ರಗಳಿಗೂ ವಿಜಯಭಾಸ್ಕರ್ ಸಂಗೀತ ನೀಡಿದ್ದಾರೆ. ದಕ್ಷಿಣಾದಿ ಹಾಗೂ ಉತ್ತರಾದಿ ಸಂಗೀತಗಳೆರಡರಲ್ಲೂ ಪರಿಣತರಾಗಿದ್ದ ಇವರ ಸಂಗೀತ ಜನಪ್ರಿಯವಾಯಿತಲ್ಲದೆ ಅನೇಕ ಪ್ರಶಸ್ತಿಗಳನ್ನೂ ಪಡೆಯಿತು. 

ಸಾಹಿತ್ಯಕ್ಕೆ ರಾಗ ಸಂಯೋಜಿಸುವುದೆಂದರೆ ವಿಜಯಭಾಸ್ಕರ್ ಅವರಿಗೆ ಎಲ್ಲಿಲ್ಲದ ಶ್ರದ್ಧೆ. ಗೀತೆಯ ಸಾಹಿತ್ಯಕ್ಕೆ ಸಂಗೀತ ಸಂಯೋಜಿಸುವಾಗ ಸಾಹಿತ್ಯದ ಶುದ್ಧತೆ ಉಳಿಯಬೇಕು. ಎಂಬುದು ಇವರ ನಿಲುವು. ಕನ್ನಡ ಚಿತ್ರರಂಗಕ್ಕೆ ಅನೇಕ ಹೊಸ ಗಾಯಕರನ್ನು ಪರಿಚಯಿಸಿದ್ದಾರೆ. ``ಗುಡ್ಡಿ ಗಾಯಕಿ ವಾಣಿಜಯರಾಂ ಅವರನ್ನು ಕನ್ನಡ ತೆರೆಗೆ ಪರಿಚಯಿಸಿದ್ದಲ್ಲದೆ, ಹೆಚ್ಚು ಅವಕಾಶಗಳನ್ನೂ ಅವರಿಗೆ ನೀಡಿದರು. ಕನ್ನಡದ ಗಾಯಕ ಬಿ.ಆರ್.ಛಾಯಾ ಅವರನ್ನು ಕನ್ನಡ ಚಿತ್ರರಂಗದಲ್ಲಿ ಬೆಳಕಿಗೆ ತಂದವರು ವಿಜಯಭಾಸ್ಕರ್. ಕನ್ನಡದ ಸಿರಿಕಂಠಗಳಾದ ಬೆಂಗಳೂರು ಲತಾ ಹಾಗೂ ಬಿ.ಕೆ.ಸುಮಿತ್ರಾ ಅವರಂತಹ ಗಾಯಕಿಯರಿಗೆ ಹೆಚ್ಚು ಅವಕಾಶಗಳನ್ನು ಕಲ್ಪಿಸಿ ಪ್ರೋತ್ಸಾಹಿಸಿದ್ದಾರೆ. ಹೊಸಕಂಠಗಳನ್ನು ಪರಿಚಯಿಸಿದಂತೆಯೇ ಹೊಸ ಕವಿ ಸಾಹಿತಿಗಳನ್ನೂ ಕನ್ನಡ ಬೆಳ್ಳಿ ತೆರೆಗೆ ಪರಿಚಯಿಸಿದ್ದಾರೆ.

``ಮಲಯಮಾರುತ ಹಾಗೂ ``ಮುರಳೀಗಾನ ಅಮೃತಪಾನ ಚಿತ್ರಗಳಲ್ಲಿನ ಶ್ರೇಷ್ಠ ಸಂಗೀತ ಸಂಯೋಜನೆಗಾಗಿ ಎರಡುಬಾರಿ ರಾಷ್ಟ್ರದ ಅತಿ ಪ್ರತಿಷ್ಠಿತ ``ಸುರ್‍ಸಿಂಗಾರ್ ಪ್ರಶಸ್ತಿಯನ್ನು ಪಡೆದರು, ಆ ಪ್ರಶಸ್ತಿಗೆ ಪಾತ್ರರಾದ ಪ್ರಪ್ರಥಮ ದಾಕ್ಷಿಣಾತ್ಯ ಸಂಗೀತ ನಿರ್ದೇಶಕರು. ಬೆಳ್ಳಿಮೋಡ (1967-68), ಯಾವ ಜನ್ಮದ ಮೈತ್ರಿ (1972-73), ಧರಣಿ ಮಂಡಲ ಮಧ್ಯದೊಳಗೆ (1983-84), ಮುರಳಿಗಾನ ಅಮೃತಪಾನ (1989-90), ಪತಿತ ಪಾವನಿ (1991-92), ಚಿತ್ರಗಳಲ್ಲಿ ಮಧುರ ಸಂಗೀತ ನಿರ್ದೇಶಕ್ಕಾಗಿ ಆರು ಬಾರಿ ರಾಜ್ಯ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ನಾಂದಿ, ಉಯ್ಯಾಲೆ, ಗೆಜ್ಜೆಪೂಜೆ, ಮುಕ್ತಿ, ಶರಪಂಜರ, ನಾಗರಹಾವು, ಕಲ್ಯಾಣಿ, ಕಥಾಸಂಗಮ, ಮಲಯಮಾರುತ, ಗ್ರಹಣ, ಗಂಗವ್ವ ಗಂಗಾಮಯಿ, ಇವರ ಸಂಗೀತ ನಿರ್ದೇಶನದಲ್ಲಿ ನಿರ್ಮಾಣವಾದ ಚಿತ್ರಗಳಲ್ಲಿ ಕೆಲವು. ಚಲನಚಿತ್ರದ ಕಥೆಗೆ ಅನುಗುಣವಾದ ಹಿನ್ನೆಲೆ ಸಂಗೀತ ರೂಪಿಸುವಲ್ಲಿ ಪರಿಣತರಾದ ಕೆಲವೇ ಮಂದಿಯಲ್ಲಿ ವಿಜಯಭಾಸ್ಕರ್ ಒಬ್ಬರು. ಸದಾ ಸೂಟ್‍ನಲ್ಲಿಯೇ ಕಾಣಿಸಿಕೊಳ್ಳುವ ವಿಜಯಭಾಸ್ಕರ್ ಅವರನ್ನು ಉದ್ಯಮದ ಮಂದಿ ಜಂಟಲ್‍ಮನ್ ಸಂಗೀತ ನಿರ್ದೇಶಕರೆಂದೇ ಕರೆಯುತ್ತಿದ್ದರು. ಶಿಸ್ತು-ಶ್ರದ್ಧೆ-ದುಡಿಮೆಗೆ ಹೆಸರಾದವರು. ಸಂಗೀತ ಸಾಮ್ರಾಟ್, ಸಂಗೀತ ಬ್ರಹ್ಮ, ಸಂಗೀತ ಕಲಾನಿಧಿ, ಮುಂತಾದ ಅನೇಕ ಬಿರುದು-ಪ್ರಶಸ್ತಿಗಳು ಇವರನ್ನು ಹುಡುಕಿಕೊಂಡೇ ಬಂದಿವೆ. ಅಡೂರು ಗೋಪಾಲಕೃಷ್ಣನ್ ಅವರ ಚಿತ್ರಗಳಿಗೂ ಸಂಗೀತ ನೀಡಿದ ವಿಜಯಭಾಸ್ಕರ್ ಕೇರಳದ ವಿಮರ್ಶಕರ ಪ್ರಶಸ್ತಿಯನ್ನೂ ತನ್ನದಾಗಿಸಿಕೊಂಡವರು.

ಚಲನಚಿತ್ರ ಸಂಗೀತ ವಲಯದಲ್ಲಿ ಅತ್ಯಂತ ವಿಶಿಷ್ಟವಾದ ಸೇವೆಯನ್ನು ಸಲ್ಲಿಸಿರುವ ವಿಜಯಭಾಸ್ಕರ್ ಅವರಿಗೆ ರಾಜ್ಯಸರ್ಕಾರ 2000-2001 ರ ಡಾ||ರಾಜಕುಮಾರ್ ಪ್ರಶಸ್ತಿಯನ್ನು ನೀಡಿ ಪುರಸ್ಕರಿಸಿದೆ. ಕನ್ನಡ ಚಿತ್ರ ಸಂಗೀತ ಸಾಮ್ರಾಟ್, 2002ರ ಮಾರ್ಚ್ 3ರಂದು ಬೆಂಗಳೂರಿನಲ್ಲಿ ವಿಧಿವಶರಾದರು. ವಿಜಯಭಾಸ್ಕರ್ ಇಂದು ಅವರಿಲ್ಲವಾದರೂ ಅವರು ನೀಡಿದ ಸಂಗೀತ-ಸಂಯೋಜಿಸಿದ ರಾಗಮಾಧುರ್ಯಗಳು ಇಂದಿಗೂ ಜನಪ್ರಿಯವಾಗಿದ್ದು ಅವರ ನೆನಪನ್ನು ಜೀವಂತವಾಗಿರಿಸಿವೆ.
(ಶ್ರೀಕೃಪಾ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ